Hubballi: ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
ಹುಬ್ಬಳ್ಳಿ: ‘ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ಈಗ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ. ಅವರು ಗೆದ್ದ ನಂತರ ಪ್ರಶ್ನೆಗೆ ಉತ್ತರಿಸುತ್ತೇವೆ ಎಂದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ಅವರ ಪರವಾಗಿ ಪ್ರಚಾರ ಮಾಡಿದ್ದರು. ಯುವಕನಿಗೆ ಮತ ನೀಡಿ ಗೆಲ್ಲಿಸುವಂತೆ ಮತಯಾಚನೆ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಈ ದೇಶದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಒಂದು ವೇಳೆ ನಿಜವಾಗಿದ್ದರೆ ಕಾನೂನಿನ ಪ್ರಕಾರ ಕ್ರಮ ಆಗಲಿ ಎಂದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಲವ್ ಜಿಹಾದ್ ತಂದಿದೆ. ಅದರ ಪ್ರಯೋಗ ಹುಬ್ಬಳ್ಳಿಯಲ್ಲಿ ಆಗಿದೆ’ ಎಂದು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಮಾತನಾಡಿದರು.
ಬರ ಪರಿಹಾರ ರೈತರಿಗೆ ತಲುಪಿಸಿ
ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಯುಪಿಎ ಸರ್ಕಾರ 10 ವರ್ಷದಲ್ಲಿ ರಾಜ್ಯಕ್ಕೆ 4571 ಕೋಟಿ ರೂಪಾಯಿ ನೀಡಿದೆ. ಆದರೆ ನಮ್ಮ ಬಿಜೆಪಿ ಸರಕಾರ ಕಳೆದ ಹತ್ತು ವರ್ಷದಲ್ಲಿ 15,920 ಕೋಟಿ ರೂಪಾಯಿ ನೀಡಿದೆ. ಯುಪಿಎ ಸರಕಾರ ರಾಜ್ಯಕ್ಕೆ ಚಿಪ್ಪು ನೀಡಿದೆ. ಇದು ಕಾಂಗ್ರೆಸ್ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
2005ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ನಾವು ₹44,838 ಕೋಟಿ ಬರ ಪರಿಹಾರ ಕೇಳಿದ್ದೆವು. ಅವರು ₹4,571 ಕೋಟಿ ನೀಡಿದ್ದರು. 2014ರಿಂದ ಈವರೆಗೆ ಎನ್‌ಡಿಎ ಸರ್ಕಾರಕ್ಕೆ ರಾಜ್ಯ ಸರ್ಕಾರ ₹25,591 ಕೋಟಿ ಕೇಳಿತ್ತು. ₹15,920 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಶೇ 62.21ರಷ್ಟು ಬಿಡುಗಡೆ ಆಗಿದ್ದು, ಇದು ನಮ್ಮ ಮಾರ್ಕ್ಸ್ ಕಾರ್ಡ್’ ಎಂದರು.
‘ರಾಜ್ಯದ ಬರ ಪರಿಸ್ಥಿತಿ ಅರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಬರ ಪರಿಹಾರ ಹಣ ಬಿಡುಗಡೆಗೆ ಅನುಮತಿ ಕೋರಿದ್ದರು. ಇದು ಗೊತ್ತಾಗಿ ಕಾಂಗ್ರೆಸ್‌ನವರು ನ್ಯಾಯಾಲಯದ ಮೊರೆ ಹೋಗಿ, ನಾವೇ ಹೋರಾಟ ಮಾಡಿ ಬಿಡುಗಡೆ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ನಿಮ್ಮ ಪಾತ್ರ ಏನೂ ಇಲ್ಲ’ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಹೇಳಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಇದು ವಿಳಂಬವಾಗಿತ್ತು. ಈ ಕುರಿತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೋರಿದ್ದರು.
‘ಸಾಮಾಜಿಕ ನ್ಯಾಯದ ಪರ ಮಾತನಾಡುವ ಕಾಂಗ್ರೆಸ್ ಸರ್ಕಾರ ಒಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹೊರಟಿದೆ. ಧರ್ಮಾಧಾರಿತ ಮೀಸಲಾತಿ ಇಲ್ಲ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ನೀವು ಸಂವಿಧಾನ ರಕ್ಷಕರೋ, ಭಕ್ಷಕರೋ’ ಎಂದು ಪ್ರಶ್ನಿಸಿದರು.
[DISPLAY_ULTIMATE_SOCIAL_ICONS]
ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣಕ್ಕೆ | ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು