ವಿಜಯಪುರ: ಇಕ್ಲಾಸಖಾನ್ ಮಸೀದಿ ಬಳಿಯ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ದಲಿತ ಸಂಘಟನೆಯ ಯುವಕರು ಕೆಲಸ ಆರಂಭಿಸಲು ಮುಂದಾದಾಗ, ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಗೊಂದಲವನ್ನು ನಿವಾರಿಸಲು ಪೊಲೀಸರು ಮಧ್ಯಸ್ಥಿಕೆ ವಹಿಸಿ, ಪರಿಸ್ಥಿತಿಯನ್ನು ಸುಧಾರಿಸಿದರು.ಶನಿವಾರ, ಮನಗೂಳಿ ಅಗಸಿಯ ಬಳಿಯಿರುವ ಮಸೀದಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಯ ಸಂರಕ್ಷಿತ ವಲಯದಲ್ಲಿ ಇದೆ. ದಲಿತ ಸಂಘಟನೆಯ ಯುವಕರು ಸಮುದಾಯ ಭವನ ನಿರ್ಮಿಸಲು ಮುಂದಾದಾಗ, ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಜನರು ಈ ನಿರ್ಧಾರಕ್ಕೆ ಆಕ್ಷೇಪಿಸಿದರು. ಪರಿಣಾಮ, ಎರಡೂ ಸಮುದಾಯದ ಮುಖಂಡರು ಮತ್ತು ಯುವಕರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾವಣೆಗೊಂಡು ಗೊಂದಲದ ವಾತಾವರಣ ನಿರ್ಮಾಣವಾಯಿತು.ಘಟನೆ ತಿಳಿದ ಕೂಡಲೇ, ಗೋಲಗುಮ್ಮಟ ಪೊಲೀಸ್ ವೃತ್ತದ ಸಿಪಿಐ ಮಹಾಂತೇಶ ಮಠಪತಿ ಮತ್ತು ಅವರ ಸಿಬಂದಿಗಳು ಸ್ಥಳಕ್ಕೆ ಧಾವಿಸಿ, ಜಮಾಯಿಸಿದ್ದ ಜನರನ್ನು ಚದುರಿಸಿದರು. ನಂತರ, ಸ್ಥಳದ ವಿವಾದ ಕುರಿತು ಎರಡೂ ಸಮುದಾಯದ ಜನರನ್ನು ಸಮಾಧಾನಪಡಿಸಿ, ಸೂಕ್ತ ದಾಖಲೆಗಳನ್ನು ತರುವಂತೆ ಮುಖಂಡರಿಗೆ ಸೂಚಿಸಿದರು.