ಟೆಹ್ರಾನ್: ಅಜರ್ಬೈಜಾನ್ನಿಂದ ಮರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರೆಳೆದಿದ್ದಾರೆ. ರವಿವಾರ ನಡೆದ ಘಟನೆಯಲ್ಲಿ ಇರಾನ್ ಅಧ್ಯಕ್ಷರೊಂದಿಗೆ ವಿದೇಶಾಂಗ ಸಚಿವ ಹೊಸೇನ್ ಅಮೀರಬ್ ದೆಲ್ಲಾಹಿಯನ್ ಮತ್ತು ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು.
ಇರಾನ್ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್ನ ಅವಶೇಷಗಳು ಪತ್ತೆಯಾದ ಕೆಲವೇ ನಿಮಿಷಗಳಲ್ಲಿ, ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ರಕ್ಷಣಾ ತಂಡಗಳು ಪರ್ವತಗಳಲ್ಲಿ ಪತನಗೊಂಡ ಹೆಲಿಕಾಪ್ಟರ್ನ ಅವಶೇಷಗಳನ್ನು ಪತ್ತೆ ಮಾಡಿವೆ.
ಅಧ್ಯಕ್ಷರ ಹೆಲಿಕಾಪ್ಟರ್ಗೆ ಬೆಂಗಾವಲಾಗಿ ತೆರಳಿದ್ದ ಇನ್ನೆರಡು ಹೆಲಿಕಾಪ್ಟರ್ಗಳು ವಾಪಸ್ಸಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಭವಿಸಿದ ಸ್ಥಳ ತಬ್ರಿಜ್ನಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರತಿಕೂಲ ಹವಾಮಾನ ಮತ್ತು ರಾತ್ರಿಯಾದ ಕಾರಣ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು.
ಈ ದುರಂತವಾಗಿರುವ ಪ್ರದೇಶ, ಟೆಹ್ರಾನ್ನಿಂದ ಸುಮಾರು 600 ಕಿ.ಮೀ. ದೂರದಲ್ಲಿರುವ ವಾಯುವ್ಯ ಇರಾನ್ನ ಅಜರ್ಬೈಜಾನ್ ಗಡಿಯಲ್ಲಿ ಉಂಟಾಗಿದೆ.