ವಾರಾಣಸಿ, ಜೂನ್ 4: ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) 1,52,513 ಮತಗಳ ಅಂತರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2014 ಮತ್ತು 2019ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾಗಿದ್ದ ಮೋದಿ, ಈ ಬಾರಿ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಈ ಚುನಾವಣೆಯಲ್ಲಿ ಮೋದಿಗೆ 6,12,970 ಮತಗಳು ಲಭಿಸಿದ್ದು, ಕಾಂಗ್ರೆಸ್‌ನ ಅಜಯ್ ರೈ 4,60,457 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಎಸ್‌ಪಿಯಿಂದ ಅಥರ್ ಜಮಾಲ್ ಲಾರಿ, ಮತ್ತು ಇತರ ಸ್ಪರ್ಧಿಗಳಾದ ದಿನೇಶ್ ಕುಮಾರ್ ಯಾದವ್, ಗಗನ್ ಪ್ರಕಾಶ್ ಯಾದವ್, ಸಂಜಯ್ ಕುಮಾರ್ ತಿವಾರಿ, ಕೋಲಿಶೆಟ್ಟಿ ಶಿವಕುಮಾರ್ ಕೂಡ ಸ್ಪರ್ಧಿಸಿದ್ದರು.
ಮೋದಿ 2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಭಾರೀ ಅಂತರದಿಂದ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ‘ದೇವಾಲಯಗಳ ನಗರ’, ‘ದೇಶದ ಧಾರ್ಮಿಕ ರಾಜಧಾನಿ’, ‘ದೀಪಗಳ ನಗರ’, ‘ಶಿವನ ನಗರ’, ‘ಜ್ಞಾನದ ನಗರ’ ಎಂಬ ಹೆಸರಾದ ವಾರಾಣಸಿ, ಈ ಬಾರಿ ಹೈ ಪ್ರೊಫೈಲ್ ಕ್ಷೇತ್ರವಾಗಿ ಹೊರಹೊಮ್ಮಿದೆ.
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಬಿಜೆಪಿ ಮೈತ್ರಿಕೂಟ ಐದೂ ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. 4 ಸ್ಥಾನಗಳು ಬಿಜೆಪಿಗೆ ಮತ್ತು ಒಂದು ಸ್ಥಾನ ಅಪ್ನಾ ದಳ (ಸೋನೇಲಾಲ್) ಗೆ ಸೇರಿತ್ತು.