ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ನಮ್ಮ ರಾಜ್ಯದಲ್ಲಿ ಆಗಿದ್ದು ಖೇದಕರ ಎಂದು ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಗೃಹ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ. ಈ ಎಲ್ಲ ವಿಚಾರಗಳನ್ನು ಹಾಸನ ಬಿಜೆಪಿ ಮುಖಂಡ ದೇವರಾಜಗೌಡ ಡಿಸೆಂಬರ್ ಸಮಯದಲ್ಲೇ ವಿಜಯೇಂದ್ರ ಗಮನಕ್ಕೆ ತಂದಿದ್ದರು. ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಗಮನಕ್ಕೆ ತಂದಿದ್ದರು. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರು ಎಂದು ಹೇಳಿದರು.
ಪ್ರಜ್ವಲ್ ಅವರಿಂದ ಎಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಲಿದೆ. ಅವರು ಸಂಸದರಾಗಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಆಮಿಷವೊಡ್ಡಿ ಮೋಸ ಮಾಡಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದಾಗ, ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟಿಸಿದ್ದರು. ಆದರೆ, ಪ್ರಜ್ವಲ್ ಕರ್ಮಕಾಂಡದ ವಿಷಯ ಬಂದಾಗ ಅದೇ ನಾಯಕರು ಕುರುಡರು ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ’ ಎಂದು ಜರಿದರು.
ಜಗದೀಶ ಶೆಟ್ಟರ ಅವರು ಪ್ರತಿಪಕ್ಷ ನಾಯಕರಾಗಿಯೂ ಬಹಳಷ್ಟು ಹೋರಾಟ ಮಾಡಿದವರು.. ಆದರೆ, ಬಿಜೆಪಿ ಮೈತ್ರಿಕೂಟದ ವಿಕೃತ ಮನಸ್ಸಿನ ನಾಯಕನ ಕೃತ್ಯದ ವಿಚಾರವಾಗಿ ಮೌನ ವಹಿಸಿದ್ದಾರೆ. ಮಾಜಿ ಶಾಸಕ ಸಂಜಯ ಪಾಟೀಲ ನನ್ನನ್ನು ನಿಂದಿಸಿದಾಗ ಶೆಟ್ಟರ್ ಮತ್ತು ಸಂಸದೆ ಮಂಗಲಾ ಅಂಗಡಿ ನಕ್ಕಿದ್ದರು. ಈಗ ಪ್ರಜ್ವಲ್ ಕೃತ್ಯದ ವಿರುದ್ಧವೂ ಅವರೆಲ್ಲರೂ ಪ್ರತಿಭಟನೆ ನಡೆಸಬೇಕು’ ಎಂದು ಆಗ್ರಹಿಸಿದರು.
ವಿಜಯೇಂದ್ರ, ಅಶೋಕಣ್ಣ ತಮ್ಮ ರಾಜಕೀಯ ನಿಲುವು ಏನು ಹೇಳಬೇಕು. 300ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆ ನೀಚ ಕೃತ್ಯವನ್ನು ಖಂಡಿಸುತ್ತಿಲ್ಲ. ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಈ ಬಗ್ಗೆ ಮಾತನಾಡುತ್ತಿಲ್ಲ. ಬೆಳಗಾವಿಗೆ ಬಂದ ಗೌರವಾನ್ವಿತ ಪ್ರಧಾನಿ ಕೂಡ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ. ರಾಜಕೀಯ ಲಾಭಕ್ಕಾಗಿ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತಿದ್ದಿರಾ?. ಮಹಿಳೆಯರ ಬಗ್ಗೆ ಬಿಜೆಪಿಗೆ ನಿಜವಾಗಲೂ ಗೌರವ ಇದ್ದಿದ್ದರೆ ಈ ಕೃತ್ಯ ಖಂಡಿಸಬೇಕಿತ್ತು. ಪ್ರಜ್ವಲ್ ರೇವಣ್ಣ ಮಹಿಳಾಪೀಡಕ ಎಂಬುದು ಗೊತ್ತಿದ್ದರೂ ಬಿಜೆಪಿಯವರು ರಕ್ಷಣೆ ಮಾಡಿದ್ದಾರೆ. ನನಗೆ ವಿದೇಶದಿಂದ ಹಲವು ಮಹಿಳೆಯರು ಫೋನ್ ಮಾಡಿ ಕೇಳ್ತಿದ್ದಾರೆ ಎಂದರು.
ಹುಬ್ಬಳ್ಳಿ ನೇಹಾ ಹತ್ಯೆ ಖಂಡಿಸಿದ ಶೆಟ್ಟರ್, ಮಂಗಳಾ ಅಂಗಡಿ ಈ ವಿಚಾರದಲ್ಲಿ ಮೌನ ಏಕೆ? ನಿಮ್ಮ ಮೈತ್ರಿ ಅಭ್ಯರ್ಥಿಯ ವರ್ತನೆಯನ್ನು ಖಂಡಿಸಬೇಕು. 16 ವರ್ಷದಿಂದ 50 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ನೊಂದವರ, ಸಂತ್ರಸ್ತರ ಪರವಾಗಿ ನಾನು ಓರ್ವ ಮಹಿಳೆಯಾಗಿ, ಸಚಿವೆಯಾಗಿ ನಿಲ್ಲುವೆ ಎಂದು ಹೆಬ್ಬಾಳ್ಕರ್ ಹೇಳಿದರು.