ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರು ಯಾವುದೇ ದೇಶದಲ್ಲಿದ್ದರು ಹಿಡಿದು ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ಸಂಬಂಧ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಪಾಸ್ಪೋರ್ಟ್ ರದ್ದತಿ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಪ್ರಜ್ವಲ್ ರೇವಣ್ಣ ಅವರನ್ನು ಕೇಂದ್ರ ಸರಕಾರವೇ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಹೆಚ್ಡಿ ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಎಂದು ಹೇಳಿದ್ದರು. ನನ್ನ ಮಗ ನಿಖಿಲ್ ಬೇರೆ ಅಲ್ಲ, ಪ್ರಜ್ವಲ್ ರೇವಣ್ಣ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಪ್ರಜ್ವಲ್ ಪ್ರಕರಣ ಮೊದಲೇ ಬಿಜೆಪಿಗೂ ಗೊತ್ತಿತ್ತು. ಆದರೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು. ಈಗ ಯಾಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ನೋಟಿಸ್ಗೆ ಸ್ಪಂದಿಸದಿದ್ದರೇ ಕಾನೂನು ಕ್ರಮ: ಪರಮೇಶ್ವರ್
ಸೆಕ್ಷನ್ 41ಎ ಅಡಿಯಲ್ಲಿ ಪ್ರಜ್ವಲ್ಗೆ ನೋಟಿಸ್ ಜಾರಿ ಮಾಡಿದ್ದೇವೆ. ಪ್ರಜ್ವಲ್ ಪರ ವಕೀಲರು ಟೈಂ ಕೊಡಿ ಅಂತ ಕೇಳಿದ್ದಾರೆ. ಸಮಯ ಕೊಡಲು ಅವಕಾಶ ಇಲ್ಲ ಎಂದು ತಿಳಿಸಿದ್ದೇವೆ. ಹೆಚ್ಡಿ ರೇವಣ್ಣ ಕೂಡ 24 ಗಂಟೆ ಸಮಯ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್ ನೀಡಿದ್ದೇವೆ. ಅದಕ್ಕೂ ಸ್ಪಂದಿಸದಿದ್ದರೇ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಲುಕ್ ಔಟ್ ನೊಟೀಸ್ ಕೂಡ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿಚ ಜಿ ಪರಮೇಶ್ವರ್ ಹೇಳಿದರು.