ಬೆಳಗಾವಿ, (ಜೂನ್ 04): ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 14ನೇ ಸುತ್ತಿನ ಎಣಿಕೆಯಲ್ಲಿ 70 ಸಾವಿರ ಮತಗಳ ಮುನ್ನಡೆ ಸಾಧಿಸಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಬಿಜೆಪಿಯ ಅಣ್ಣಸಾಹೇಬ್ ಜೊಲ್ಲೆ ವಿರುದ್ಧ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಂಡಿದ್ದು, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ಸಂಭ್ರಮಾಚರಣೆಯಲ್ಲಿ ಕಿಡಿಗೇಡಿಯೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾನೆ. ಚಿಕ್ಕೋಡಿಯ ಮತ ಎಣಿಕೆ ಕೇಂದ್ರದ ಹೊರವಲಯದಲ್ಲಿ ಘಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತ ಜಮೀರ್ ನಾಯಿಕವಾಡಿ ಎನ್ನುವಾತ ಪಾಕಿಸ್ತಾನಕ್ಕೆ, ಪ್ರಿಯಾಂಕಾ ಜಾರಕಿಹೊಳಿಗೆ ಜಿಂದಾಬಾದ್ ಎಂದು ಕೂಗಿದ್ದಾನೆ. ಪ್ರಿಯಾಂಕಾ ಜಾರಕಿಹೊಳಿಗೆ ಜಿಂದಾಬಾದ್ ಎಂದು ಘೋಷಣೆ ಕೂಗಿ ಚಿಕ್ಕೋಡಿಯಿಂದ ಬೆಳಗಾವಿಗೆ ಬಂದಿದ್ದಾನೆ. ಕೂಡಲೇ ಅಲರ್ಟ್ ಆದ ಚಿಕ್ಕೋಡಿ ಪೊಲೀಸರು, ಬೆಳಗಾವಿ ಬಸ್ ನಿಲ್ದಾಣದಲ್ಲಿ ಜಮೀರ್ ನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗ, ವಿಧಾನಸೌಧದಲ್ಲೇ ಕಾಂಗ್ರೆಸ್ ನೂತನ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಜೈಕಾರ ಕೂಗಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಕ್ ಪರ ಘೋಷಣೆ ಮೊಳಗಿದೆ.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ವಿರುದ್ಧ 96,253 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ 6,80,179 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ 5,83,926 ಮತಗಳನ್ನು ಪಡೆದು, 96,253 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.