ಕ್ರಿಕೆಟ್ ಸ್ಕಾಟ್ಲೆಂಡ್ ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಲೋಗೋ ಇರುವ ಟಿ20 ತಂಡದ ಜೆರ್ಸಿಯನ್ನು ಅನಾವರಣಗೊಳಿಸಿದೆ. ಬುಧವಾರ ನಡೆದ ಜಂಟಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. 2024ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವವನ್ನು ಏಪ್ರಿಲ್ 21 ರಂದು ಕೆಎಂಎಫ್ ಘೋಷಿಸಿತ್ತು. ಸ್ಕಾಟ್ಲೆಂಡ್ ತಂಡದ ಜೆರ್ಸಿಯ ತೋಳಿನ ಭಾಗದಲ್ಲಿ ನಂದಿನಿಯ ಲೋಗೋವನ್ನು ಮುದ್ರಿಸಲಾಗಿದೆ.
ಸ್ಕಾಟ್ಲೆಂಡ್ ಪುರುಷರ ಟಿ20 ಕ್ರಿಕೆಟ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ಜೆರ್ಸಿಯನ್ನು ಅನಾವರಣಗೊಳಿಸಿದರು.
ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ವಹಿಸುವುದು ಜಾಗತಿಕ ಮಾರುಕಟ್ಟೆಯಲ್ಲಿ ಕೆಎಂಎಫ್‌ನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಮಹತ್ವದ ನಿರ್ಧಾರವಾಗಿದೆ. ಇದು ಬ್ರ್ಯಾಂಡ್ ಬಿಲ್ಡಿಂಗ್ ಪ್ರಕ್ರಿಯೆಯ ಪ್ರಮುಖ ತಂತ್ರವಾಗಿದೆ. ಪಂದ್ಯಾವಳಿಯ ಮೊದಲು ಮತ್ತು ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಹಲವು ಮಾಧ್ಯಮ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ತುಪ್ಪ ಮತ್ತು ಸಿಹಿತಿಂಡಿಗಳನ್ನು ಅಮೆರಿಕಕ್ಕೆ ರವಾನಿಸಲಾಗುವುದು ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿದ್ದಾರೆ.
“ಜಾಗತಿಕ ಬ್ರ್ಯಾಂಡ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದು ನಮ್ಮ ಪ್ರಸ್ತುತ ಸ್ಥಿತಿಯು ಹೇಗಿದೆ ಮತ್ತು ಭವಿಷ್ಯದಲ್ಲಿ ನಾವು ಎಲ್ಲಿಗೆ ತಲುಪಬಹುದು ಎಂಬುದಕ್ಕೆ ಪ್ರತಿಬಿಂಬವಾಗಿದೆ,” ಎಂದು ಕ್ರಿಕೆಟ್ ಸ್ಕಾಟ್ಲೆಂಡ್ನ ಕಾರ್ಯಾಚರಣೆ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಪಾಲ್ ಮಕಾರಿ ಹೇಳಿದರು.