Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಲು ಎಸ್‌ಐಟಿ ಸಿದ್ಧತೆ


ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡವು (ಎಸ್‌ಐಟಿ) ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಮುಂದಾಗಿದ್ದು, ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲು ಸಿದ್ಧತೆ ನಡೆಸಿದೆ.

23 ದಿನಗಳಿಂದ ವಿದೇಶದಲ್ಲಿರುವ ಪ್ರಜ್ವಲ್‌ ಅವರನ್ನು ಪತ್ತೆ ಹಚ್ಚುವುದು ಎಸ್‌ಐಟಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶತಾಯಗತಾಯ ಅವರನ್ನು ಬಂಧಿಸಲು ಯತ್ನಿಸುತ್ತಿರುವ ಎಸ್‌ಐಟಿಯು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಅರೆಸ್ಟ್‌ ವಾರಂಟ್‌ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಪ್ರಜ್ವಲ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಇಂಟರ್‌ಪೋಲ್‌ ಮೂಲಕ ಕೇಂದ್ರಕ್ಕೆ ಎಸ್‌ಐಟಿ ಮನವಿ ಮಾಡಲಿದೆ.

ಸಾಮಾನ್ಯವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ ಬಳಿಕ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗುತ್ತದೆ. ಆದರೆ ಗಂಭೀರ ಪ್ರಕರಣಗಳಲ್ಲಿ ಆರೋಪಿಯು ವಿದೇಶದಲ್ಲಿ ತಲೆಮರೆಸಿಕೊಂಡಾಗ, ಕೋರ್ಟ್‌ನಿಂದ ಅರೆಸ್ಟ್‌ ವಾರಂಟ್‌ ಪಡೆದು ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಅವಕಾಶವಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ.

ಪ್ರಜ್ವಲ್‌ ತಲೆಮರೆಸಿಕೊಂಡಿರುವ ಜರ್ಮನಿ ದೇಶಕ್ಕೆ ರೆಡ್‌ ಕಾರ್ನರ್‌ ನೋಟಿಸ್‌ ನೀಡಿದರೆ, ಅಲ್ಲಿನ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ಪತ್ತೆಹಚ್ಚಿ ಭಾರತ ಸರಕಾರಕ್ಕೆ ಮಾಹಿತಿ ನೀಡುತ್ತಾರೆ. ಅನಂತರ ಇಲ್ಲಿನ ಪೊಲೀಸರು ಆರೋಪಿಯನ್ನು ಕರೆತರಬೇಕಾಗುತ್ತದೆ. ಕೆಲವೊಮ್ಮೆ ಅಲ್ಲಿನ ಪೊಲೀಸರೇ ವಿಮಾನದ ಮೂಲಕ ಭಾರತಕ್ಕೆ ಕಳುಹಿಸುವ ವ್ಯವಸ್ಥೆಯೂ ಇದೆ. ಆದರೆ ಭಾರತ ಹಾಗೂ ಜರ್ಮನಿ ದೇಶದ ನಡುವೆ ಈ ಸಂಬಂಧ ಕೆಲವು ಒಪ್ಪಂದಗಳು ಅಗತ್ಯ. ಈ ಮೂಲಕ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ಪತ್ತೆಗೆ ಈ ತಂತ್ರ ರೂಪಿಸುತ್ತಿದ್ದಾರೆ.

ವಿಚಾರಣೆಗೆ ಹಾಜರಾಗದ ಕಾರಣದಿಂದ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಎಸ್‌ಐಟಿ ಅಧಿಕಾರಿಗಳು ಪದೇಪದೆ ನೋಟಿಸ್‌ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಪ್ರಜ್ವಲ್‌ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್‌ ಜಾರಿಗೊಳಿಸಿದೆ. ಆದರೆ ಅರೆಸ್ಟ್‌ ವಾರಂಟ್‌ ಇದ್ದರೂ ಪ್ರಜ್ವಲ್‌ ಭಾರತಕ್ಕೆ ಮರಳಿದ ನಂತರವಷ್ಟೇ ಅವರನ್ನು ಬಂಧಿಸಬಹುದಾಗಿದೆ.

Leave a Comment

Your email address will not be published. Required fields are marked *

Scroll to Top