ಬೆಂಗಳೂರು: ರಾಜ್ಯಾದ್ಯಂತ ಗ್ರಾಮ, ತಾಲೂಕು, ಮತ್ತು ಜಿಲ್ಲಾ ಪಂಚಾಯತ್ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟವು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 4 ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ನಡೆಸಲು ನಿರ್ಧರಿಸಿದೆ. ಹೀಗಾಗಿ, ಗ್ರಾಮ ಪಂಚಾಯತ್ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.
ಆರ್‌ಡಿಪಿಆರ್ ಇಲಾಖೆಯ ಸುಮಾರು 11 ಒಕ್ಕೂಟಗಳು ಬೃಹತ್ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ಈ ಹೋರಾಟವು ಗ್ರಾಮೀಣ ಮಟ್ಟದ ಎಲ್ಲಾ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೌಕರರ ಸಮಸ್ಯೆಗಳನ್ನು ಸೆಪ್ಟೆಂಬರ್ 30ರೊಳಗೆ ಬಗೆಹರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸರ್ಕಾರ ಮತ್ತು ಇಲಾಖೆಯ ಸಚಿವರು ಸ್ಪಂದಿಸದಿದ್ದರೆ, ಅಕ್ಟೋಬರ್ 4ರಿಂದ ಅನಿರ್ದಿಷ್ಟಾವಧಿ ಹೋರಾಟ ನಿಶ್ಚಿತವೆಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಗೆ ಸಾಥ್ ನೀಡುವವರಲ್ಲಿ:
ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ಜವಾನರು, ಸ್ವಚ್ಛತಾಗಾರರು, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸದಸ್ಯರ ಒಕ್ಕೂಟಗಳು ಭಾಗವಹಿಸುತ್ತಿವೆ.
ಪ್ರತಿಭಟನೆಯ ಪ್ರಮುಖ ಬೇಡಿಕೆಗಳು:
- ಏಳು ವರ್ಷ ಸೇವೆ ಸಲ್ಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅನಿವಾರ್ಯವಾಗಿ ವರ್ಗಾವಣೆಯ ನಿಯಮವನ್ನು ರದ್ದುಪಡಿಸುವುದು, ಜಿಲ್ಲೆಯಲ್ಲಿ ತಮ್ಮದೇ ಇಚ್ಛೆಯ ಮೇರೆಗೆ ವರ್ಗಾವಣೆಗೆ ಅವಕಾಶ ನೀಡುವುದು, ಮತ್ತು ಯಾವುದೇ ನಿಯಮ ಬದಲಾವಣೆಗೆ ಮುನ್ನ ಸಂಘದ ಸಲಹೆ ಪಡೆಯುವುದು.
- ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು “ಗಜೆಟೆಡ್ ಗ್ರೂಪ್ ಬಿ” ಹುದ್ದೆಗೆ ಉನ್ನತೀಕರಿಸುವುದು.
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅನುಷ್ಠಾನಕ್ಕಾಗಿ ನಿಗದಿತ ಗುರಿಗಳನ್ನು ಕೈಬಿಡುವುದು ಮತ್ತು ಈ ಯೋಜನೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ಗ್ರಾಮ ಪಂಚಾಯತ್‌ಗಳ ಅಭಿಪ್ರಾಯ ಪಡೆದು ಮುಂದುವರಿಸುವುದು.
- ಗ್ರಾಮ ಪಂಚಾಯತ್‌ಗಳಲ್ಲಿ ಅಗತ್ಯವಿರುವ ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಮತ್ತು ಇತರ ಸಿಬ್ಬಂದಿಯನ್ನು ನೇಮಕ ಮಾಡುವುದು, ಮತ್ತು ತಾಂತ್ರಿಕ ಮತ್ತು ವಿಷಯ ನಿರ್ವಾಹಕರನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಒದಗಿಸುವುದು.
- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಡ್ತಿ ಮತ್ತು ಜೇಷ್ಠತಾ ಪಟ್ಟಿಯಲ್ಲಿ ಇರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವುದು.
- ಕುಂದು-ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆಯ ಮಾದರಿಯಲ್ಲಿ ಸದೃಢಗೊಳಿಸುವುದು, ತಜ್ಞರ ಸಮಿತಿ ನೇಮಿಸುವುದು, ಏಕರೂಪದ ಆಡಿಟ್ ಪದ್ಧತಿ ಜಾರಿಗೊಳಿಸುವುದು, ಮತ್ತು ಸೇವಾ ಸಂಬಂಧಿತ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುವುದು.